ಸಂಗ್ರಹಿಸಬೇಕಾದ ವ್ಯಕ್ತಿವ್ವ

ನಾವು ಯಾವಾಗಲು ದೂರದರ್ಶಿಗಳಾದರೆ ? ಆಹಾ !! ಎಂತಹ ಪರಿಪೂರ್ಣ ಸ್ಥಿತಿ ..ಅಂತೀರಾ ..ಪ್ರಶಾಂತ ಮನಸ್ಸಿನವರು ಆದ್ರೆ? ..ನಾನು ಯಾರೋ ಯೋಗಿಗಳ ಬಗ್ಗೆ ಮಾತಾಡ್ತಿದಿನಿ ಅಂದುಕೊಂಡಿದ್ದೀರಾ ...ಖಂಡಿತ ಇಲ್ಲ! ಕಳೆದ ವಾರಗಳಿಂದ ಪ್ರಪಂಚದಲ್ಲಿ ಆಗುತ್ತಿರುವ ಜೈವಿಕ ಯುದ್ಧದಿಂದ ಆಗಿರುವ ಜೀವ ಹಾನಿ ಕಲ್ಪನೆಗೂ ಮಿಗಿಲಾದುದು. ಇಂತಹ ಸಮಯದಲ್ಲಿ ನನ್ನ ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತಿವೆ. ಮನೆಯ ಹೊರಗೆ ನಿರ್ದಿಷ್ಟ ಕಾರಣವಿಲ್ಲದೆ ಹೋಗಲು ಸಾಧ್ಯವಿಲ್ಲ. ಹಾಗಿದ್ದಾಗ ನಾವು ಯಾವ ವಸ್ತುಗಳನ್ನು ಸಂಗ್ರಹಿಸಿ ಇಡಲಿ? ಇದು ಗೃಹಬಂಧನದ ಮೂರನೆಯ ವಾರ.. ಮೊದಲನೆಯ ವಾರದಲ್ಲಿ ಅಷ್ಟೇನೂ ಕಷ್ಟವಾಗಲಿಲ್ಲ ಏನೋ ಒಂದು ಹೊಸ ಅನುಭವ. ಸಾಕಷ್ಟು ದಿನಸಿ,ಕಾಯಿಪಲ್ಯೆ ಹಾಗು ಖಾದ್ಯ ವಸ್ತುಗಳನ್ನು ಶೇಖರಿಸಿ  ಇಟ್ಟಿದ್ದೀನಿ. ಎರಡನೇ ವಾರ ಬರುತ್ತಿದ್ದಂತೆ ಊಟದಮೇಲೆ ಗಮನ ಕಡಿಮೆ ಆಗಿ, ಮಕ್ಕಳು ಮನೆಯವರೊಂದಿಗೆ  ಯಾವುದೇ ಗೊಂದಲವಿಲ್ಲದೆ ಮಾನಸಿಕ ಸಂತುಲವನ್ನು ಕಳೆದುಕೊಳ್ಳದೆ ಅನಿರೀಕ್ಷಿತ ಹಾಗು ಅನಿಶ್ಚಿತ ದಿನಗಳನ್ನು ಹೇಗೆ ಕಳೆಯುವುದು ಎಂಬ ಯಕ್ಷ ಪ್ರಶ್ನೆ?
ಮೂರನೇಯ ವಾರಾಂತ್ಯದ ಹೊತ್ತಿಗೆ ನನ್ನ ಅಜ್ಜಿಯ ಜೀವನ ಚರಿತ್ರೆ ಕಣ್ಣು ಮುಂದೆ ಬಂತು ..ಭಾಳ ಶಾಂತ ಸ್ವಭಾವದವರು ಹಾಗು ಅಲ್ಪ ತೃಪ್ತರು ಆದ ಸರ ಜೀವಿ ನನ್ನ ಅವ್ವ (ತಾಯಿಯ ತಾಯಿ)
ಈ ದಿನಗಳಲ್ಲಿ ನಾನು ಸಂಗ್ರಹಿಸಿ ಶೇಖರಿಬೇಕಾಗಿದ್ದು ಏನು ಎಂದು ಸ್ವಲ್ಪ ಸ್ವಲ್ಪ ತಿಳಿಯುತ್ತಿದೆ


೧.ಸಹನೆ - ಇದು ಒಂದೇ ದಿನದಲ್ಲಿ ಬರುವಂತಹ ಗುಣ ಲಕ್ಷಣವಲ್ಲ. ವರುಷಗಳಿಂದ ಕ್ರಮೇಣವಾಗಿ ಅಳವಡಿಕೊಳ್ಳಬೇಕಾದಂತಹ ಗುಣ. ಎಂತಂಹ ಸಂದರ್ಭದಲ್ಲೂ ಉಪಯೋಗಕ್ಕೆ ಬರುವ ಬಹು ಮುಖ್ಯವಾದ ಗುಣ.
ಈ ಪರಿಸ್ಥಿತಿಯಲ್ಲಿ ನನಗೆ ಮಿತಿಯಿಲ್ಲದ ಪ್ರಮಾಣದಲ್ಲಿ ಬೇಕಾಗಿದೆ.

೨. ಮಾನಸಿಕ ಸ್ಥಿರತೆ - ನಮ್ಮ ಪೀಳಿಗೆಯ ಒಂದು ಮಹಾ ಯುದ್ಧವೇ ಅನ್ನಬಹುದು.ನಾವು ಎಂದು ನಿರೀಕ್ಷಿಸದ ಪರಿಸ್ಥಿತಿ. ಎಲ್ಲೆಲ್ಲೂ ಆತಂಕ .ಮೆನೆಯಿಂದ ಹೊರಗೆ ಕಾಲಿಡಲು ದಿಗಿಲು. ಎರಡು ಚಿಕ್ಕ ಮಕ್ಕಳನ್ನು ಸಂಭಾಳಿಸಲು ಹಾಗು ಈ ಸನ್ನಿವೇಶವನ್ನು ಶಾಂತಿಯಿಂದ ಎದುರಿಸಲು ಬೇಕಾದ ಮನಃಸ್ಥಿತಿ.

೩.ಅಲ್ಪ ತೃಪ್ತಿ- ಮೊದಲನೆಯ ವಾರದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ದಿನ ಕಳಿದಂತೆ ಆಹಾರ ಪದಾರ್ಥಗಳು ಕಡಿಮೆಯಾಗಿ ಏನು ಇದೆ ಅದನ್ನೇ ಆಕ್ಷೇಪಣೆ ಮಾಡದೆ ಮುನ್ನಡೆಯುವುದು. ಅನವಶ್ಯಕ ವಸ್ತುಗಳ ಖರೀದಿ ,ಅವುಗಳ ಸಂಗ್ರಹ.ವಿಪರ್ಯಾಸವೆಂದರೆ ಅವುಯಾವು ಈಗ ಉಪಯೂಗಕ್ಕೆ ಬರುವುದಿಲ್ಲ. ಇದು ಕೇವಲ ಆಹಾರಕ್ಕೆ ಸೀಮಿತವಲ್ಲದೆ ಜೀವನದ ಎಲ್ಲಾ ವಸ್ತುಗಳ  ಮೇಲೆ ಅನ್ವಯಿಸುತ್ತದೆ. ನಮ್ಮ ತಂದೆ ಸದಾ ಹೇಳುತ್ತಾರೆ 'ನಿನಗೆ ಯಾವುದಾದರು ವಸ್ತು ಬೇಕು ಅನಿಸಿದರೆ ಆ ಕ್ಷಣ ಖರೀದಿ ಮಾಡದೇ ಸ್ವಲ್ಪ ಸಮಯ ಅದು ಇಲ್ಲದೆ ನಿನ್ನ ಜೀವನ ನಡೆಯುತ್ತಾ ಅಂತ ಯೋಚಿಸು' ಎಂದು.ಹೀಗೆ ಮಾಡುವುದರಿಂದ ನಿನ್ನ ಮನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸಾಮಾನು ಕಡಿಮೆಯಾಗುತ್ತದೆ ಅಂತ. ಎಷ್ಟು ಸತ್ಯ ಅಲ್ವಾ ..ಅವರು ಹೇಳಿದ್ದು..

೪.ಶಾರೀರಿಕ ಆರೋಗ್ಯ - ಸ್ಥೂಲ ಅಥವಾ ಸುಂದರ ಮೈಕಟ್ಟೋ ! ಆದರೆ ಆರೋಗ್ಯಕರ ಶರೀರ ಅತ್ಯಾವಶಕ. ಅದರಲ್ಲೂ ಮನೆಯ ಹೆಣ್ಣು ಮಕ್ಕಳು (ತಾಯಿಯರು) ಆರೋಗ್ಯ ಬಹಳ ಮುಖ್ಯ. ಇವರೇ ಎಲ್ಲವನ್ನು ಸುಲಭವಾಗಿ ನಿಭಾಯಿಸರು ಸಾಧ್ಯ.ಇದರಲ್ಲಿ ಯಾವುದೇ ಪಕ್ಶಪಾತವಿಲ್ಲ. ಗಂಡಸರು ತಮ್ಮ ಕೆಲಸದಲ್ಲಿ ವ್ಯಸ್ಥರಾಗಿರುವ ಕಾರಣ,ಮನೆಯ ನಿರ್ವಹಣೆ ಹೆಂಗಸರ ಕೈಯಲ್ಲಿ ಇರುತ್ತದೆ. ಪುರುಷರಾಗಲಿ ಮಹಿಳೆಯರು ಆಗಲಿ ಆರೋಗ್ಯವನ್ನು ನಿರ್ಲಕ್ಷಿಸಬಾರದು.

೫.ಸಂದೇಶಗಳ ಮಹತ್ವ  - ಸಂಪರ್ಕದ ಮಾಧ್ಯಮ ಈ ಶತಮಾದಲ್ಲಿ ಎಷ್ಟು ಮುಂದುವರಿದಿದೆ, ಜನರು ಒಂದು ಒಳ್ಳೆಯ ವಿಷಯವನ್ನು ಜನತೆಗೆ ತಲುಪಿಸಿವ ಮುನ್ನವೇ ಅದರ ಹತ್ತಾರು ಅರ್ಥಗಳು ಹೊರಬಂದು ,ಮಾಹಿತಿಯ ಮುಖ್ಯ ಉದ್ದೇಶವೇ ಕಳೆದುಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ನಾವು ಋಣಾತ್ಮಕ ಸುದ್ದಿಯನ್ನು ಹರಡುವ ಬದಲು,ಮೌನವಾಗಿ ಇರುವುದು ಉತ್ತಮ. ಸಾಧ್ಯವಾದಷ್ಟು ಒಳ್ಳೆಯ ,ಧನಾತ್ಮಕ ವಿಷಯಗಳನ್ನು ಹರಡಲು ಪಯತ್ನಿಸುವು. ಒಂದು ವಿಷಯವನ್ನು ಅತಿಯಾಗಿ ವಿಶ್ಲೇಷಣೆ ಮಾಡದೇ ಅದನ್ನು ಸಹಜ ರೀತಿಯಿಂದ ಸ್ವೀಕರಿಸಬೇಕು.

೬. ಮಕ್ಕಳಲ್ಲಿ ತೊಡಗುವುದು- ೨ ದಿವಸ ಮಕ್ಕಳು ಶಾಲೆಗೆ ಹೋಗದಿದ್ದರೆ ಆಕಾಶ ತಲೆ ಮೇಲೆ ಬೀಳುವುದಿಲ್ಲ. ಅವರ ನಡವಳಿಕೆ, ನಾವು ಕೊಡುವ ಸಂಸ್ಕಾರ, ಅವರೊಂದಿಗೆ ನಮ್ಮ ಒಳ್ಳೆಯ ಸಂಬಂಧ ಇವೇ ಕೊನೆಯತನಕ ಉಳಿಯುವ ಸಿರಿ. ನಮ್ಮನ್ನು ಅವಲಂಬಿಸಿ ಅವರು ಮುಂದಿನ ಜೀವನವನ್ನು ನಡೆಸುತ್ತಾರೆ. ಅಂದರೆ ನಮ್ಮ ಮೇಲೆ ಅದೆಷ್ಟು ಜವಾಬ್ದಾರಿ ಇದೆ. ೩ ವಾರಗಲ್ಲಿ ನನ್ನ ಮಕ್ಕಳು ಊಟ ಉಡಿಗೆಯ ಬಗ್ಗೆ ಹಠ ಮಾಡಿಲ್ಲ. ಅವರಿಗೆ ಬೇಕಾದುದ್ದು ನಮ್ಮ ಸಮಯ.ನಮಗೆ ಬೇಕಾಗಿರಿವುದು ಸ್ವಲ್ಪ ಸಹನೆ ಅಷ್ಟೇ. ದಿನದ ಕೊನೆಯಲ್ಲಿ  ಎಲ್ಲರು ನಿಶ್ಚಿಂತೆಯಿಂದ ಮಲಗುತ್ತಾರೆ.

೭. ಉಳಿತಾಯ - ಸ್ವಲ್ಪ ಮಟ್ಟಿಗೆ ಉಳಿತಾಯ ಮಾಡುವು ಒಂದು ಒಳ್ಳೆಯ ಅಭ್ಯಾಸ. ಭವಿಷ್ಯವನ್ನು ಯಾರು ಕಂಡಿಲ್ಲ ಹೀಗಾಗಿ, ಉಳಿತಾಯ ಮಾಡುವುದು ನಾನು ಚಿಕ್ಕಂದಿನಿಂದ ಕಲೆತು ಬಂದ ಗುಣ ಆದರೆ ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ಕೆಲವೊಮ್ಮೆ ಇದನ್ನು ಮರೆತು ದುಂದು ವ್ಯಚ್ಚ ಮಾಡುತ್ತೇವೆ.

೮. ಸ್ನೇಹಿತರು ಹಾಗು ಸಂಬಂದಿಕರು- ಇವರಿಲ್ಲದೆ ಜೀವನವಿಲ್ಲ. ಒಬ್ಬ ಒಳ್ಳೆಯ ಸ್ನೇಹಿತನನ್ನು ಪಡೆಯಲು ನಾವು ಎಷ್ಟು ವರ್ಷಗಳನ್ನೂ ಅವರಲ್ಲಿ ಹೂಡಬೇಕು. ಎಂತಹ ಕಷ್ಟ ಪರಿಸ್ಥಿತಿಯಲ್ಲೂ ನಾವು ನಿರ್ಭಯ ನಿರ್ಭಿಡೆಯಿಂದ ಇವರಲ್ಲಿ ಮೊರೆಹೋಗಬಹುದು. ಇವರು ನಾವು ಸಂಪಾದಿಸಿದ ಸ್ವತ್ತು.ಈ ಸಂಬಂಧವನ್ನು ಸದಾ ಕಾಪಾಡಬೇಕು.

೯.ಹವ್ಯಾಸ  - ಹವ್ಯಾಸ ಅನ್ನುವುದು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳಬೇಕು ಅನ್ನುವುದು ಸತ್ಯ ಆದರೆ ಯಾವ ವಯಸ್ಸಿನಲ್ಲೂ ಬಿಡುವಿನ ವೇಳೆಯನಲ್ಲಿ ಒಳ್ಳೆಯೇ ಹವ್ಯಾಸ ಬೆಳೆಸಿಕೊಳ್ಳುವುದು ನಮ್ಮ ಮನಸ್ಸಿನ್ನ ಹಾಗು ಶಾರೀರಿಕ ಧನುವನ್ನು ನಿವಾರಿಸುತ್ತದೆ.

ಹೀಗೆ ಮೇಲಿನ ಒಂದೊಂದು ವಿಷಯದ ಮೇಲೆ ನಾನು ಘಂಟೆ ಗಟ್ಟಲೆ ಬರೆಯಬಹುದು. ಆದರೆ ನಾನು ಏನನ್ನು ತಿಳಿಸಬೇಕು ಎಂದು ಅಂದುಕೊಂಡೆ ಅದನ್ನು ವ್ಯಕ್ತ ಪಡಿಸಿದ್ದೀನಿ ಅಂತ ನನ್ನ  ಅನಿಸಿಕೆ .ಹೀಗೆ  ಹಲವು ಅದೃಶ್ಯ ಅಸ್ಪೃಶ್ಯ ಗುಣಗಳು ಸ್ಥಿರ ಚರ ವಸ್ತುಗಳಿಗಿಂತ ಅಮೂಲ್ಯ ಅತುಲ್ಯವಾದವು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ