ಸನಾತನ ''ಸುಧರ್ಮ''

ಸನಾತನ ''ಸುಧರ್ಮ''

ಮೈಸೂರು ಅಂದರೆ ಒಂದು ರೋಮಾಂಚನ ಅದರಲ್ಲೂ ಅಗ್ರಹಾರ ಅಂದ್ರೆ ಪಂಚಪ್ರಾಣ. ನನ್ನ ಬಾಲ್ಯವೆಲ್ಲಾ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿ ಕಳೆದಿದ್ದೇನೆ. ೮೦-೯೦   ದಶಕಗಳು ನನ್ನ ಜೀವನದ ಅತ್ಯುತ್ತಮ ಕ್ಷಣಗಳು. ರಾಮಚಂದ್ರ ಅಗ್ರಹಾರ ಅಂದರೆ ಸಾಮಾನ್ಯವೆಂದು ಅನ್ಕೋಬೇಡಿ. ಬಹುಷಃ  ಪ್ರಪಂಚದಲ್ಲೇ ೨ನೇ ಕ್ರಾಸ್ ಬೀದಿಯಲ್ಲಿ ಒಂದಲ್ಲಾ ಎರಡಲ್ಲಾ ಮುದ್ರಣಾಲಯಗಳು ಇದ್ದವು. ಇದು ಬಹಳ ಅಪರೂಪವೇ ಸರಿ. ಅದರಲ್ಲೂ ಪ್ರಪಂಚದ  ಏಕಮಾತ್ರ ಸಂಸ್ಕೃತ ದಿನ ಪತ್ರಿಕೆ ''ಸುಧರ್ಮ'' ಇದ್ದ ಬೀದಿ. ಸುಧರ್ಮ ಪತ್ರಿಕೆಯ ಸಂಪಾದಕ  ಪದ್ಮಶ್ರೀ KV ಸಂಪತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖ ದೊಂದಿಗೆ ಬಹಳಷ್ಟು ಬಾಲ್ಯದ ನೆನಪುಗಳ ಮಹಾಪೂರವೇ ಹರಿದು ಬಂದಿದೆ. ಅವರು ತಮ್ಮ ತಂದೆ ಆದ್ಯ ಪ್ರವರ್ತಕರಾದಗಿರ್ವಾನ ವಾನಿ ಭೂಷನಂ, ‘’ವಿದ್ಯಾನಿಧಿಪಂಡಿತ್ ವಿದ್ವಾನ್ ಶ್ರೀ ವಾದಿರಾಜ್ ಐಯಂಗಾರ್ ಅವರ ಕನಸಿನ ಕನ್ನಡಿಯ ಪ್ರತಿಬಿಂಬವೇ ''ಸುಧರ್ಮ'' ದಿನಪತ್ರಿಕೆ. ಸುಧರ್ಮಾ ದಿನಪತ್ರಿಕೆ  1970 ದಶಕದ ಅಂತ್ಯದಲ್ಲಿ ಅಕ್ಷರ ಮುದ್ರಣದೊಂದಿಗೆ ಪ್ರಾರಂಭವಾಯಿತು. ಮುದ್ರಣ ತಂತ್ರಜ್ಞಾನ ಆಧುನೀಕರಣಗೊಂಡಂತೆ ಪ್ರಸ್ತುತ ಸುಧರ್ಮವನ್ನು ಗಣಕೀಕೃತ ಆಫ್ಸೆಟ್ ಮುದ್ರಣದಿಂದ ಮುದ್ರಿಸಲಾಗುತ್ತಿದೆ. ಅವರ ವಿದ್ವತ್ತು ಪಾಂಡಿತ್ಯ ಕೇವಲ ಸಂಸ್ಕೃತ ಭಾಷಾ ಉಳಿಯುವಿಕೆಗಲ್ಲದೆ ಹೆಣ್ಣು ಮಕ್ಕಳ ಶಿಕ್ಷಣ ಕೊರತೆ ಎದ್ದುತೋರುತ್ತಿದ ದಿನಗಳಲ್ಲಿ  ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮಾತ್ರ ಮೀಸಲಾಗಿರುವ ಶ್ರೀಕಾಂತ ಶಿಕ್ಷಣ ಸಮಾಜವನ್ನು ಸ್ಥಾಪಿಸಿದರು. ಅದೇ ಶ್ರೀಕಾಂತ ಶಾಲೆಯಲ್ಲಿ ನಾನು ಕೂಡ  ಅಂಗನವಾಡಿ ವಿದ್ಯಾಭ್ಯಾಸ ಮಾಡಿದ್ದಲ್ಲದೆ , ಅವರ ಮುದ್ರಣಾಲಯಕ್ಕೆ  ಆಡುವ ನೆಪದಲ್ಲಿ ಪದೇ ಪದೇ ಭೇಟಿ ಕೊಟ್ಟಿದ್ದೇನೆ.

ಎಷ್ಟು ನಮ್ರ ಸ್ವಭಾವ ಎಷ್ಟು ಉತ್ಸುಕತೆಯಿಂದ ನಾವು ಕೇಳಿದಕ್ಕೆಲ್ಲ ಉತ್ತರ ನೀಡುವ ಪರಿ ಇನ್ನು ನನ್ನ ಮನಸಿನಲ್ಲಿ ಹಸಿರಾಗಿದೆ. ಸಂಸ್ಕೃತ ಪಠ್ಯ ಮಾಡಿದ್ದೇನೆ ,ಸುಧರ್ಮ ಪ್ರೆಸ್ ಮಗ್ಗುಲಲ್ಲೇ ಬೆಳೆದಿದ್ದೇನೆ ಅಂತ ಜಂಬ ಕೊಚ್ಚಿಕೊಳ್ಳೋದು ಬಿಟ್ರೆ ನನ್ನಲಿ ಸಂಸ್ಕೃತದ ಜ್ಞಾನ ಶಾಲೆಗಷ್ಟೇ ಸೀಮಿತವಿತ್ತು ಅನ್ನುವ ಅಳುಕು ದುಃಖವು ಇದೆ.

ನನ್ನ ಕಾಲೇಜಿನ ದಿನಗಳು ನೆನಪಾಯಿತು. ಕಾಳಿದಾಸ ,ಬಾಣ ,ಭಾಸ ಹಾಗು ಮತ್ತಿತರು ಮಹಾಕವಿಗಳೆಲ್ಲರ ಒಂದು ತುಣುಕು ನಮ್ಮ ಪಠ್ಯದಲ್ಲಿ. ಎಷ್ಟು ವೈಭವಯುತ ಭಾಷೆ, ಅಷ್ಟೇ ಸೊಗಸಾದ ಬರಹಗಳು.  ಸಂಸ್ಕೃತದಲ್ಲಿರುವ ಎಲ್ಲಾ ಸಾಹಿತ್ಯ ದಾಖಲೆಗಳನ್ನುಹಾಗು  ಮಹಾ ಗ್ರಂಥಗಳನ್ನು  ಓದಿ ಅರಿತುಕೊಳ್ಳುಲು ಒಂದು ಜನುಮದಲ್ಲಿ  ಬಹುಷಃ  ಸಾಧ್ಯವಾಗುವುದಿಲ್ಲ. ಹಿಂದೂ ಧರ್ಮದ ತತ್ವಜ್ಞಾನ ,ಶಾಸ್ತ್ರಗಳು ,ಕಲೆಗಳು ,ವಿದ್ಯೆ ,ಅರ್ಥಶಾಸ್ತ್ರ ಹೀಗೆ ೧೩ನೆ ಶತಕದ ತನಕ ಎಲ್ಲಾ ವಿಷಯಗಳ ಬಗ್ಗೆ ದೀರ್ಘವಾದ ಉಲ್ಲೇಖವಿರುವ  ಸಾಹಿತ್ಯ ಸಂಸ್ಕೃತ ಭಾಷೆಯಲ್ಲಿದೆ. 

ನಮ್ಮ ಪಠ್ಯಕ್ರಮದಲ್ಲಿ ಭಾಷೆಯನ್ನು ಒಂದು ವಿಷಯವನ್ನಾಗಿ ಕಲಿಸುತ್ತಾರೆ. ಹೀಗಾಗಿ ನಮಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುವದರ ಬಗ್ಗೆ ಗಮನವಿರುತ್ತದೆ ಹೊರತು ಭಾಷೆಯನ್ನು ಕಲಿಯುವುದರಲ್ಲ. ನಮ್ಮ ಕಲಿಕೆ ಕೇವಲ ಬರವಣಿಗೆಗೆ ಸೀಮಿತವಾಗಿ ಸಂಭಾಷಣೆಯ ಸ್ವರೂಪಕ್ಕೆ ಬರುವುದೇಇಲ್ಲ. ನಮ್ಮ ಪಠ್ಯಕ್ರಮದಲ್ಲಿ ಕೆಲವು ಬದಲಾವಣೆಗಳು ಆದರೆ - ವರ್ಷಗಳ ಕಾಲ ನಿರಂತರವಾಗಿ ಸಂಸ್ಕೃತ ಕಲೆತ ನಾನು ಸ್ವಲ್ಪ ಮಟ್ಟಿಗೆ ಮಾತಾಡಬಹುದಿತ್ತೇನೋ ಅನ್ನಿಸುತ್ತದೆ.

ಇತ್ತೀಚೆಗಷ್ಟೇ ಒಬ್ಬ ಮಹನೀಯರ ಹಾಗು ಸಂಸ್ಕೃತ ವಿದ್ವಾಂಸರೊಂದಿಗೆ ಮಾತಾಡುವ ಸಮಯದಲ್ಲಿ ಅವರನ್ನು ಕೇಳಿದೆ. ಮಕ್ಕಳಲ್ಲಿ ಸಂಸ್ಕೃತ ಭಾಷೆಯ ಆಸಕ್ತಿಯನ್ನ ಹೇಗೆ ಹುಟ್ಟಿಸುವುದು ಎಂದು.ಅದಕ್ಕೆಅವರು, ಪುರಾಣ ಕಥೆಗಳ ಮೂಲಕ ,ಹಾಡು ,ನೃತ್ಯ ,ಚಿತ್ರಕಲೆ ಹೀಗೆ ಮಕ್ಕಳಿಗೆ ಕಲಿಯುವ ಉತ್ಸಾಹ ಹೆಚ್ಚು ಆಗುವಂತಹ ಯಾವುದಾದರು ದಾರಿಯಲ್ಲಿ ನಮ್ಮ ಅಮೂಲ್ಯ ಭಾಷಾ ನಿಧಿಯನ್ನು ಸಂರಕ್ಷಿಸಬಹುದು ಹಾಗು ಬೆಳೆಸಬಹುದು.ಉದಾಹರಣೆಗೆ ಶುಭಾಷಿತಗಳು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ,ಪಂಚತಂತ್ರ  ಕಥೆಗಳು ,ನೀತಿ ಕಥೆಗಳು ,ರಾಮಾಯಣ ಮಹಾಭಾರತ ಹಾಗು ಇನ್ನಿತರ ಪುರಾಣ ಪುಣ್ಯ ಕಥೆಗಳಲ್ಲಿ ಬರುವ ಉಪಕಥೆಗಳು ಮಕ್ಕಳಿಗೆ ಸೂಕ್ತ ರೂಪದಲ್ಲಿ ತಿಳಿಸಿ,ಹೀಗೆ ಮಕ್ಕಳಲ್ಲದೆ ದೊಡ್ಡವರು ಕೂಡ ಸಂಸ್ಕೃತ ಅಭ್ಯಾಸ ಮಾಡಬಹುದು ಎಂದರು.

ಭಾರತೀಯಳಾದ ನನಗೆ ಸಂಸ್ಕೃತ ಭಾಷೆಯ  ಮೇಲೆ ಹೆಚ್ಚು ಗೌರವ  ಹಾಗು ಅಭಿಮಾನ. ಶಾಲೆಯಲ್ಲಿ ಸಂಸ್ಕೃತ ಭಾಷೆಯನ್ನು ಸುಮಾರು ವರುಷಗಳ ಕಾಲ ಕಲೆತು, ನಂತರ ಕಾಲೇಜಿನಲ್ಲೂ ವರುಷಗಳು  ಸಂಸ್ಕೃತ ವಿಧ್ಯಾಭ್ಯಾಸವನ್ನು ಮುಂದುವರಿಸಿದೆ.ಅಂದು ವಿಶ್ವ ಸಂಸ್ಕೃತ ದಿನ. ನಮ್ಮ ಅಧ್ಯಾಪಕರು ನನ್ನ ಆಸಕ್ತಿಯನ್ನು ಮೆಚ್ಚಿ ನನಗೆ ಸಂಸ್ಕೃತ ಭಾಷೆಯಲ್ಲಿ ಸ್ವಾಗತ  ಭಾಷಣವನ್ನು ಮಾಡುವಂತೆ ಹೇಳಿದ್ದೆ ತಡ ,ನಾನು ಎಲ್ಲಿಲ್ಲದ ಉತ್ಸಾಹದಿಂದ ತ್ಯಯಾರಿ ಮಾಡಿ ಅಥಿತಿಗಳ ಮುಂದೆ ಭಾಷಣ ಮಾಡಿದೆ. ಆಗ ನಮ್ಮಲ್ಲಿ ಮೊಬೈಲ್ ಫೋನ್ ಇರಲಿಲ್ಲ ಹೀಗಾಗಿ ನನ್ನ ಮನಸಿನಲ್ಲಿ ಮಾತ್ರ ಒಂದು ಸ್ಪಷ್ಟ ಹಾಗು ಬಲವಾದ ಚಿತ್ರ ಉಳಿದಿದೆ.ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿ ಸಂಸ್ಕೃತದ  ಮೇಲೆ ಗಮನ ಕಡಿಮೆಯಾಗಿದ್ದೇನೋ ನಿಜ, ಆದರೆ ಅಭಿಮಾನ ಮಾತ್ರ ಸದಾ ಕಾಲ ಉನ್ನತ ಮಟ್ಟದಲ್ಲೇ ಇದೆ. ಶಾಲೆಯಲ್ಲಿ ನಿಷ್ಠೆಯಿಂದ ಕಲೆತ ಒಂದು ಸುಂದರ ಹಾಗು ಶ್ರೇಷ್ಠ ಭಾಷೆಯನ್ನು ಮುಂದುವರಿಸದಿರುವು ನನಗೆ ಬಹಳ ಬೇಸರ ಮಾಡಿದೆ. ಈಜು, ಸೈಕಲ್ ಹೇಗೆ ಒಮ್ಮೆ ಕಲಿತರೆ ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲವೋ ಸಂಸ್ಕೃತವು ಹಾಗೆ ಇದ್ದಿದರೆ ಎಷ್ಟು ಚಂದ.. ಈಗ ಎಲ್ಲಾ ಮರೆತಂತಾಗಿದೆ..ಸಂಸ್ಕೃತ ಎಂದೊಡನೆ ನಮ್ಮ ಸ್ವತ್ತು ಎನ್ನುವ ಭಾವ. ಆದರೆ ಕಲಿಕೆ ಬಂದಾಗ ಭೀತಿ. ಶಾಸ್ತ್ರ,ಪುರಾಣಗಳ ಪ್ರಸ್ತಾವವಾದರೆ  ನಾವು ಸಂಸ್ಕೃತ ಭಾಷೆಯಲ್ಲಿರುವ ಗ್ರಂಥಗಳನ್ನು ನಮ್ಮ ಸ್ಥಳೀಯ ಭಾಷೆಗೆ ಅನುವಾದಿಸಿದ ಗ್ರಂಥದ ಕೆಲವೇ ಪಂಗ್ತಿಯನ್ನು ತ್ವರಿತ ಪರಿಹಾರಕ್ಕಾಗಿ   ಓದಿತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ.ಇಲ್ಲವೇ ಪಂಡಿತರಲ್ಲಿ ಮೊರೆ ಹೋಗುತ್ತೇವೆ.ಸಂಸ್ಕೃತ ಅಧ್ಯಯನ ಮಾಡುವುದು ಸುಲಭವಲ್ಲ ಆದರೆ ಆಸಕ್ತಿಯಿದ್ದರೆ ಅಸಾಧ್ಯವೇನಲ್ಲ.

ಸಂಸ್ಕೃತದಲ್ಲಿ ವ್ಯವಹರಿಸುವುದು ಒಂದು ಕಷ್ಟ ಸಾಧ್ಯವಾದ ಈಗಿನ ಸಮಾಜದಲ್ಲಿ ಒಂದು ದೈನಿಕ ವಾರ್ತಾ ಪತ್ರಿಕೆ ಶುರುಮಾಡಿ ಅದನ್ನು ಇಲ್ಲಿಯವರೆಗೆ ಇಷ್ಟರ ಮಟ್ಟಿಗೆ ಬೆಳಸಿ ಉಳಿಸಿದ್ದ ದಿವ್ಯ ಚೇತನ ಶ್ರೀ ಸಂಪತ್ ಕುಮಾರ್ ಅವರ ನಿಧನದ ಸುದ್ದಿ ನನಗೆ ಬಹಳ ದುಃಖ ತಂದಿದೆ. ಮೂಲತಃ ಸಂಸ್ಕೃತ ಪದವಾದ ಸನಾತನ ಎಂದರೆ "ಆದಿ ಮತ್ತು ಅಂತ್ಯವಿಲ್ಲದ, ನಿರಂತರ ನಡೆಯುತ್ತಿರುವ" ಎಂಬ ಅರ್ಥ. ಸುಧರ್ಮ  ಒಂದು ಪ್ರತಿಷ್ಠಾನ ಎಂದರೆ ತಪ್ಪಾಗಲಾರದು ಇದು ಬರುವ ಶತ ಶತಮಾನಗಳು  ಉಳಿಯಲಿ ಬೆಳೆಯಲಿ ಎಂದು ಹಾರೈಸುತ್ತೇನೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

E-motional !!!

ಮಲ್ಲಿಗೆಯ ಜಿಜ್ಞಾಸೆ