ಬಾಲ್ಯದ ಬೆಳದಿಂಗಳು
ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ.
ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ.
ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹೊರಗೆ ಆಟಕ್ಕೆ ಹೋದರೆ ಯಾರದಾದರೂ ಮನೇಲಿ ಊಟ ಮಾಡತಿದ್ದೆ’) ಆನಂದ.
ನಮಗೆ ಬೇಸಿಗೆಯ ರಜೆಯಲ್ಲಿ ಅಜ್ಜಿ ಮನೆಯಾದ ಹುಬ್ಬಳ್ಳಿ, ಮೌಶಿಯಂದಿರ ಊರಾದ ಶಿಗ್ಗಾವಿ, ಗದುಗ, ಧಾರ್ವಾಡ ಹೀಗೆ ಹಲವು ಊರುಗಳ ಪರ್ಯಟನೆ ಆಗುತಿತ್ತು. ನಮ್ಮ ಸೋದರಸಂಬಂಧಿ ಅಕ್ಕ ಅಣ್ಣರೊಂದಿಗೆ ಒಂದು ತಿಂಗಳು ಹೇಗೆ ಕಳೆಯುತಿದ್ವಿ ಗೊತ್ತೇ ಆಗುತ್ತಿರಲಿಲ್ಲ.
ನಾನು ಈ ಕೆಳಗೆ ಬರೆಯುವ ವಿಷಯ ಕೇವಲ ನನ್ನ ಸುತ್ತಮುತ್ತಲಿನ ಸಹೋದರ ಸಂಬಂದಿಯಲ್ಲಿ ಹಾಗು ಅವರ ಗೆಳೆಯೆರ ಗುಂಪಿನಲ್ಲಿ ಕಂಡಂತಹ ವಿಷಯ. ತಮ್ಮದೇ ಮಾರ್ಗ ಸೃಷ್ಟಿಸಿಕೊಂಡು, ಶ್ರಮಪಟ್ಟ ತಂದೆ ತಾಯಿ ವಿರುದ್ಧ ಹೋಗಿ ಭವಿಷ್ಯ ರೂಪಿಸಿಕೊಂಡ ಜನರೂ ಇದ್ದಾರೆ (ಅದು ನನಗೆ ದೊಡ್ಡವಳಾದ ಮೇಲೆ ತಿಳಿಯಿತು). ಹೀಗಾಗಿ ದಯವಿಟ್ಟು ಇದನ್ನು ಬೇರೆ ಯಾವ ಅರ್ಥದಲ್ಲಿ ತಿಳಿಯದಿರಿ.
ಮೈಸೂರಿನಲ್ಲಿ ನಾವು ವಿದ್ಯಾಭ್ಯಾಸ ಹಾಗು ಸಂಗೀತ – ನೃತ್ಯದ ಮೇಲೆ ಹೆಚ್ಚು ಗಮನ ಕೊಟ್ರೆ, ಹುಬ್ಬಳ್ಳಿ, ಬಾಗಲಕೋಟೆ ಅಂತಹ ಊರುಗಳಲ್ಲಿ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸುವ ಶಿಕ್ಷಣ ಮನೆಯಲ್ಲಿ ಕೊಟ್ಟರೂ ಅದನ್ನು ವೃತ್ತಿ ರೂಪಕ್ಕೆ ಪರಿವರ್ತಿಸುವ ಅವಕಾಶ ಕಡಿಮೆ. ವೈದ್ಯಕೀಯ ವೃತ್ತಿಯ ಹೊರತಾಗಿ, ನಾವು ನೋಡಿದ ನಮ್ಮ ಸಂಬಂಧಿಕರಲ್ಲಿ ಹೆಚ್ಚಾಗಿ ಎಲ್ಲಾ ಹೆಣ್ಣು ಮಕ್ಕಳಲ್ಲಿ ವೃತ್ತಿಪರ ಮಹತ್ವಾಕಾಂಕ್ಷೆ ಕಂಡದ್ದು ಕಡಿಮೆ. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ, ಮತ್ತೊಬ್ಬರಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿಸಬೇಕೆಂಬ ಆಸೆ ಆದರೆ, ನಮ್ಮ ಜಾತಿ ಅಡ್ಡವಾಯಿತೋ ಅಥವಾ ಸಂಪ್ರದಾಯವೋ ಗೊತ್ತಿಲ್ಲ! ಮೈಸೂರಿನಲ್ಲಿ (ಬೆಂಗಳೂರು) ಬೆಳೆದ ಮಕ್ಕಳಲ್ಲಿ ಛಾತಿ, ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಹೆಚ್ಚು ಕಂಡುಬಂದಿತು.
ನಮ್ಮ ಬ್ರಾಹ್ಮಣ ಜಾತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟೆಲ್ಲಾ ವಿದ್ಯಾಭ್ಯಾಸ ಕೊಟ್ಟು, ಎಲ್ಲಾ ಸಂಸ್ಕಾರವನ್ನು ಕೊಡುವಾಗ ಒಳ್ಳೆಯ ಗೃಹಿಣಿ ಆಗಬೇಕೆಂಬ ಅಂಶವನ್ನು ಅಧಿಕವಾಗಿ ನಮ್ಮಲ್ಲಿ ಬಿತ್ತುತ್ತಾರೆ. ಪ್ರತಿಭೆ ಹಾಗು ಜಾಣ್ಮೆಗೆ ಶಭಾಷಿ ಕೊಟ್ಟರೂ ಅದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಮನೆ ನಡೆಸುವುದು ಸುಲಭವಲ್ಲ. ಒಳ್ಳೆ ಗೃಹಿಣಿಯಾಗಿ, ಒಳ್ಳೆ ತಾಯಿಯಾಗಿ, ಎಲ್ಲವನ್ನು ನಯವಾಗಿ ನಿಭಾಯಿಸುವುದು ಎಲ್ಲಕಿಂತ ಕಷ್ಟದ ಕೆಲಸ. ಆದರೆ ಅವಕಾಶ ಸಿಕ್ಕಾಗ ನಮ್ಮ ಕನಸು ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಾಗ ಹಿಂದೇಟು ಹಾಕುತ್ತೀವಿ.
ನನ್ನ ಅದೃಷ್ಟ ಏನಂದರೆ ನನ್ನ ತಂದೆ ತಾಯಿ ಹುಬ್ಬಳ್ಳಿಯವರಾದರೂ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗು ಮೈಸೂರಿನ ಜೀವನ ಶೈಲಿಯನ್ನು ಮೆಚ್ಚಿ ಅಲ್ಲಿಯೇ ಉಳಿದು ನಮ್ಮ ಮೇಲೆ ತಮ್ಮ ಎಲ್ಲಾ ಗಮನವನ್ನು ಇಟ್ಟು ನಮ್ಮನ್ನು ಕೇವಲ ಪದವೀಧರನ್ನಾಗಿ ಸೀಮಿತ ಮಾಡದೇ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಲು ಪ್ರಯತ್ನ ಪಟ್ಟರೂ. ನಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗದಂತೆ ಉಳಿಯುವ ಸಂಸ್ಕಾರ ಕೊಟ್ಟ ನಮ್ಮ ತಂದೆ-ತಾಯಿಯಂಥವರು ಬಹಳ ವಿರಳ. ಈ ಅದೃಷ್ಟ ನನ್ನ ಸಂಬಂಧಿಕರಲ್ಲಿ ಕಂಡುಬರಲಿಲ್ಲ. ಆದರೆ ಈಗ ಜಗತ್ತು ಬದಲಾಗುತ್ತಿದೆ, ಎಲ್ಲೆಡೆ ಮಕ್ಕಳ ಪ್ರತಿಭೆ ಹಾಗು ಜಾಣ್ಮೆಯನ್ನು ಗುರುತಿಸಿ ಅವರಿಗೆ ಸರಿಯಾದ ಪ್ರೋತ್ಸಾಹ ನೀಡಲಾಗುತ್ತಿದೆ.
ಚಂದ್ರನಂತಿರುವ ಪ್ರತಿಯೊಬ್ಬ ಮಗುವಿನಲ್ಲೂ ಇರುವ ಪ್ರತಿಭೆಯನ್ನು ಕೇವಲ ಇರುಳಿಗೆ ಸೀಮಿತವಾಗಿಸದೇ ಬೆಳದಿಂಗಳಿನ ಕಾಂತಿಯಂತೆ ಎಲ್ಲೆಡೆ ಹರಡಲು ಅವಕಾಶ ಮಾಡಿಕೊಟ್ಟರೆ ಎಷ್ಟು ಸುಂದರ!
ಕಾಮೆಂಟ್‌ಗಳು