ಪವರ್ ಕಟ್
ಕಳೆದ ವಾರದಿಂದ ನಮ್ಮಲ್ಲಿ ವಿದ್ಯುತ್ ಸರಬರಾಜಿನ ಅಡಚಣೆ ಆದ್ದರಿಂದ ನಮಗೆ ನಮ್ಮೋರು, ನಮ್ಮದ ದೇಶದ ನೆನಪು ಹಸಿರಾಗಿತು.ಪವರ್ಕಟ್ ಕೆಲನಿಮಿಷದಲ್ಲ ..ಮೊದಲನೆಯ ದಿನ ಸುಮಾರು ೭ ಘಂಟೆಗಳ ಕಾಲ ಮತ್ತೆ ಎರಡನೇಯ ಬಾರಿಯು ಸುಮಾರು ಅಷ್ಟೇ ಹೊತ್ತು. ಮೊದಲಸಲವಂತೂ ಸಂಜೆಯ ಹೊತ್ತು ೫ ಹೊಡೆದಿತ್ತು. ಇನ್ನು ಬೇಸಿಗೆಯ ಕಡೆಯ ದಿನಗಳು. ಹೀಗಾಗಿ ಸಂಜೆ ಸುಮಾರು ೭ರ ತನತ ಬೆಳೆಕಿರುವುದರಿಂದ ಮಕ್ಕಳು ಹೆಗೋ ಅಲ್ಲಿಯ ತನಕ ಹೊರಗೆ ಗಾರ್ಡನ್ ಪಾರ್ಕ್ ಅಂತ ಕಾಲ ಕಳಿದರು.ನಮಗೆ ಈ ಅನುಭವ ಮರೆತಂತಾಗಿತ್ತು.ಇನ್ನು ಎರಡು ವಾರಗಳು ಆಗಬಹುದು ಅಂದಿದಾರೆ .. ೧೦ ವರ್ಷಗಳಲ್ಲಿ ಪವರ್ಕಟ್ ಆಗಿದ್ದರು ಕೆಲ ನಿಮಿಷಗಳು ಕಾಲ ಮಾತ್ರ. ನನ್ನ ಸುಮಾರು ಎಲ್ಲಾ ಲೇಖನಗಳಲ್ಲಿ ಪೀಳಿಗೆಯ ಬಗ್ಗೆ ಉಲ್ಲೇಖವಿರುತ್ತದೆ.ಈಗಲೂ ನನಗೆ ತೋಚಿದ್ದು ಅದೇ. ನಮ್ಮ ಕಾಲದಲ್ಲಿ ನಮ್ಮ ಊರಿನಲ್ಲಿ ಪವರ್ ಕಟ್ ಬಹಳ ಸಾಮಾನ್ಯ. ಬೇಸಿಗೆ ಕಾಲದಲ್ಲಂತೂ ವಿದ್ಯುತ್ತಿನ ಅವಶ್ಯಕತೆ ಹೆಚ್ಚು, ಆಗಲೇ ಹೆಚ್ಚಿನ ಅಡಚಣೆ .ಮಾರ್ಚ್ ತಿಂಗಳಿನಲ್ಲಿ ನಮ್ಮೆಲ್ಲರ ಪರೀಕ್ಷೆ, ಎಲ್ಲರ ಪಾಡು ಈಗ ನೆನಸಿಕೊಂಡರೆ ನಗು ಬರುತ್ತದೆ. ಚಿಕ್ಕಂದಿನಲ್ಲಿ ಮೇಣಬತ್ತಿಗಳು, ನಂತರ ಪೆಟ್ರೋಮ್ಯಾಕ್ಸ್ , ಆಮೇಲೆ ಎಮರ್ಜೆನ್ಸಿ ಟುಬೆಲೈಟ್ಗಳು. ನಮ್ಮ ತಂದೆಯ ಡೈಲಾಗ್ ಮಾತ್ರ ವರ್ಷಾನು ವರ್ಷಗಳಿಂದ ಅದೇ .."ಬೆಳ್ಳಿಗ್ಗೆ ಬೇಗ ಏಳಬೇಕು ,ಹಿಂದಿನ ದಿನ ತುಂಬಾ ಓದುವುದು ಇಟ್ಟುಕೊಳ್ಳಬಾರದು,ಮುಂಚಿತವಾಗಿಯೇ ತಯ್ಯಾರಿ ಮಾಡಬೇಕು ".ಅವರೆಲ್ಲ ಮಾತು ಸರಿಯಾದದ್ದೇ.
ನಮ್ಮ ಮಕ್ಕಳ ಕಾಳಜಿನೆ ಬೇರೆ. ಕರೆಂಟ್ ಇಲ್ಲಾಂದ್ರೆ ಟಿವಿ ,ಫೋನ್ ,ಐಪ್ಯಾಡ್ ಮುಂತಾದ ಯಾವುದೇ ಸಾಧನಗಳು ಇಲ್ಲ. ಅದೆಷ್ಟು ತವಕ ,ಏನೋ ಕಳೆದು ಹೋಗಿತ್ತಿದೆ ಎಂಬ ಸಂಕಟ. ಪ್ರತಿ ೫ ನಿಮಿಷಕ್ಕೆ ಕಿಟಕಿಯಿಂದ ಹೊರಗೆ ನೋಡಿ ಬಂತಾ,ಬಂತಾ ..ಯಾವಾಗ ಬರ್ತದ .. ನಮಗೆ ತಲೆ ಚಿಟ್ಟು ಹಿಡಿಯುವಷ್ಟು ಗೋಳು ..ಈ ಲೇಖನ ಬರೆಯುವಾಗ ಬಹಳಷ್ಟು ವಿಷಯಗಳು ನನ್ನ ತಲೆಯಲ್ಲಿ ಓಡ್ತಾಯಿದೆ. ಒಂದೆಡೆ ನನ್ನ ಮಕ್ಕಳ ಐಷಾರಾಮಿನ ಜೀವನ ,ಸ್ವಲ್ಪ ಹೊತ್ತಿನ ಏರುಪೇರು ಅವರಿಗೆ ಸಹಿಸಲಾಗಲಿಲ್ಲ. ಎಷ್ಟೆಲ್ಲಾ ಡ್ರಾಮಾದಲ್ಲಿ ಕಷ್ಟವಾಗಿದ್ದು ನನಗೆ ಮಾತ್ರ ಏಕೆಂದರೆ ಅಡಿಗೆ ಮಾಡುವವಳು ನಾನು. ಮೇಣಬತ್ತಿಯ ದೀಪದಲ್ಲಿ ಅಡಿಗೆ, ಊಟ ಬಹಳ ವರ್ಷಗಳ ನಂತರ ನಾನು ನನ್ನ ಪತಿಗೆ ಬಹಳ ಒಂದು ರೀತಿಯ ಆತುರತೆಯಲ್ಲಿ ಊಟ ಮಾಡುತ್ತಾ ನಮ್ಮ ಬಾಲ್ಯದ ನೆನಪಿನೊಂದಿಯೇ ತುತ್ತನ್ನು ಮೆಲಕುಹಾಕಿದ್ವಿ.
ಹಾಗೆ ಹೀಗೆ ಮಕ್ಕಳಿಗೆ ಕಥೆಗಳನ್ನು ಹೇಳಿ ರಾತ್ರಿ ಕಳೆದ್ವಿ. ಮರುದಿನ ಊರಿಂದ ಫೋನ್ ಬಂದಾಗ ಈದೆ ವಿಷಯ. ಎಲ್ಲರಿಗು ಆಶ್ಚರ್ಯ. ಅಯ್ಯೋ ! ಇಂಡಿಯಾದಲ್ಲಿ ಮಾತ್ರ ಅನ್ಕೋಡಿದ್ವಿ ,ಹಾಗೆ ಹೀಗೆ ಎಂತೆಲ್ಲ.. ಆಗ ನನಗೆ ನೆನಪಾಗಿದ್ದು ನಾವಿಲ್ಲಿ ಹೊಸದಾಗಿ ಬಂದಾಗ ನಮಗೆ ಕೇಳುತ್ತಿದ್ದ ಪ್ರಶ್ನೆಗಳು..ಪ್ರತಿಬಾರಿಯೂ ಮೊಟ್ಟಮೊದಲನೆಯ ಪ್ರಶ್ನೆ -
ಟೈಮ್ ಎಷ್ಟು ಈಗ ?
ಒಂದ್ ಸೂಡ ಕೊತ್ತಂಬರಿ ಎಷ್ಟು ?
ಒಂದ್ ಕಪ್ ಚಾ ಭಾಳ ತುಟ್ಟಿ ಅಂತ ? ಇಲ್ಲಿಗೆ ನಾವು ಅನ್ಕೋತೀವಿ ಆತಪ್ಪ ಹಂಗಾರೆ ಬ್ಯಾರೆ ಮಾತು ಶುರು ಮಾಡೋಣ ಅನ್ನೋದ್ರಾಗ ..ಮತ್ತೆ
ಅಲ್ಲೇ ಭಾಲಂದ್ರ ಭಾಳ್ ಥಂಡಿಯಂತ?
ಸೂರ್ಯನ ಮಾರೀನೇ ನೋಡೂದುಲ್ಲಂತ ?
ಅಷ್ಟು ಥಂಡಿಯಾಗ ಯಾಕ್ ಇರ್ಬೇಕು ?
ದೀಪ ಹಚ್ಚಿಲ್ಲಿಕ್ಕೆ ಅಗುದಿಲಂತ ಬರೆ ಮೇಣಬತ್ತಿ ಹಚ್ಚಬೇಕಂತ ದೇವ್ರ ಮುಂದ?
ಇಲ್ಲಿಗೆ ನಮಗೆ ಸ್ವಲ್ಪ ಮುಗ್ಧತೆಯ ಚಿತ್ರ ಹಸ್ಸ್ಯಕ್ಕೆ ಪರಿವರ್ತನೆಯಾಗುವ ಸೂಚನೆ
ಇಷ್ಟಕ್ಕೆ ಮುಗಿಲಿಲ್ಲ .. ಎಂಥೆಂಹ ಯೋಚನೆಗಳು ..
ಅಲ್ಲಿಯ ಕಾಗೀನು ಬಿಳಿಯಂತ ?
ಅಲ್ಲಿ ಜನ ಅಳುದೇ ಇಲ್ಲ0ತ್ ?
ಜೋರಾಗಿ ಮಾತಾಡೋದು ಜಗಳ ಮಾಡೋದು ಗೊತ್ತ ಇಲ್ಲ0ತ್ ?
ಎಷ್ಟೆಲ್ಲಾ ಮುಗ್ಧತೇ ಹಾಗು ನಮ್ಮ ಮೂಲಕ ವಿದೇಶನವನ್ನು ನೋಡುವ ಕುತೂಹಲ.ಆದರೆ ಕಾಲ ಕಳೆದಂತೆ ಇಂಟರ್ನೆಟ್ ,ಸ್ಮಾರ್ಟ್ ಫೋನ್ ಇವೆಲ್ಲದರ ಹಾವಳಿಯಿಂದ ..ಇಂತಹ ಪ್ರಶ್ನೆಗಳು ಬದಲಾಗಿ ಸಂಪೂರ್ಣವಾಗಿ ಬೇರೆ ವಿಷಯಗಳ ಚರ್ಚೆ ..
ಮಕ್ಕಳಿಗೆ ಕನ್ನಡದಲ್ಲಿ ಮಾತಾಡೋದು ಕಲಿಸು?ನೋಡು ನಿನ್ನ ಬೆಂಗಳೂರಿನ ಕಾಕುನ ಮೊಮ್ಮಕ್ಕಳು ಅಮೆರಿಕಾದಾಗ ಎಷ್ಟು ಚಂದ ಕನ್ನಡ ಮಾತಾಡ್ತವಾ ..ವಾಟ್ಸಪ್ಪನಾಗ ಹಾಕಿದ್ಲು ಕಾಕು ..
ನಮ್ಮ ಹಬ್ಬಗಳ ಬಗ್ಗೆ ತಿಳಿಸು? ಇಂದಿ ಮೌಶಿಯಾ ಸೊಸಿ ಎಷ್ಟ್ ಛಂದ ಮಂಗಳಗೌರಿ ಪೂಜಾ ಮಾಡಿದ್ಲು .. ನಿನ್ ಫೋಟೋ ಬರಲೇಇಲ್ಲ ..
ಪಿಜ್ಜಾ ಪಾಸ್ಟಾ ಎಲ್ಲಾ ಛಲೋ ,ಅನ್ನ ಸಾರು ಉಣಿಸು !ಸೀ ತಿನ್ನದೆ ಇಲ್ಲ ನಿನ್ ಮಕ್ಕಳು ..ನೀ ಏನು ಮಾಡುದೇ ಇಲ್ಲ ಅನಿಸ್ತದ..
ಮುಗ್ಧ ಪ್ರಶ್ನೆಗಳು ಈಗ ಕಾಳಜಿಗೆ ತಿರುಗಿದೆ ..
ಮಕ್ಕಳ ಇಂಟರ್ನೆಟ್ ಹಾಗು ಸ್ಮಾರ್ಟ್ ಫೋನ್ ಗಳಿಂದ ಅತಿಯಾದ ಬಳಕೆಯಿಂದ ಬೇಸರಗೊಂಡ ನಾವು ಒಂದು ಒಳ್ಳೆಯ ಉಪಯೋಗ ಏನೆಂದರೆ ನಮ್ಮ ತಂದೆ ತಾಯಂದಿರು ತಮ್ಮ ಮಕ್ಕಳು ಮೊಮ್ಮಕ್ಕಳನ್ನ ಯಾವಾಗ ಬೇಕಾದರೂ ನೋಡಬಹುದು.ಅಷ್ಟೇಅಲ್ಲ ಅವರಿಗೂ ಜಗತ್ತಿನೆಲ್ಲೆಡೆಯ ಸುದ್ದಿ ತಿಳಿಯುತ್ತದೆ .
ಕಾಮೆಂಟ್‌ಗಳು