ಅಡಿಗೆ ಕ್ಲಾಕಾರ

 ಅಡಿಗೆ,ಅಡಿಗೆಮನೆಯಲ್ಲಿ ಏನಾದರು ಪ್ರಯೋಗ, ಪ್ರಯತ್ನಗಳು ಸದಾ ನಡೀತಾನೇ ಇರತ್ತೆ. ಅಮ್ಮನ ಅಪ್ಪನ ನೋಡಿ ಕಲಿತು ಅಡಿಗೆ ಮಾಡೋದು ಶುರು ಮಾಡ್ತೀವಿ. ಸಂಪೂರ್ಣವಾಗಿ ನಮ್ಮೆಲ್ ಜವಾಬ್ದಾರಿ ಬಿದ್ದಾಗ ನಾವು ಕೆಲವೊಮ್ಮೆ overconfidence ನಿಂದ ಅಡಿಗೆ ಮಾಡ್ಲಿಕ್ಕೆ ಹೋಗಿ ಮುಖಭಂಗ ಆಗಿದಿದ್ದೆ. ಈ ದೇಶಕ್ಕೆ ಬಂದ ಮೇಲೆ  ನನ್ನ ಒಂದೆರಡು ಅನುಭವಗಳನ್ನು  ಹಂಚಿಕೊಳ್ಳಲು ಇಚ್ಛಿಸುತ್ತೇನೆ.


ಛಾ!

 ಎಲ್ಲಿಂದ ಬಂದ್ರು ಮದ್ಲ ನಮಗ ಛಾ ಬೇಕ್ ನೋಡ್ರಿ. ಏರ್ಪೋರ್ಟ್ ಇಂದ ಮನಿಗೆ ಬಂದು ಛಾ ಮಾಡೋಣ ಅಂತ ಹೋದ್ರ ..electric hot plate ವಲಿ.  ಎಲ್ಲೋ ನೋಡಿದ್ದೇ ಅದ್ರ ಎಂದು ಅಡಿಗಿ ಮಾಡಿಲ್ಲ. ಆತ್ ..ಇನ್ ಅದ ಪಜೀತಿ ಅಂತ ಒಂದರ ಮ್ಯಾಲೆ ನೀರಿಟ್ಟೆ ಮತ್ತೊಂದರ ಮ್ಯಾಲೆ ಹಾಲು. ಈಗ ಮರಳ್ತದ ಆಗ್ ಮರಳ್ತದ ಸಕ್ಕರಿ ಛಾಪುಡಿ ಹಾಕೋಣಂತ ನಾನು ಕಾದೆ,ಕಡೀಕು ಛಾ ಆತ,. ಈಕಡೆ ಹಾಲು ಇನ್ನು ಕುದಿಬೇಕಿತ್ತು. ನನಗೇನ್ ಗೊತ್ತ,ಉಕ್ಕಿ ಬಂದ್ಕೂಡ್ಲೇ ವಲಿ ಆರ್ಸಿದೆ. ಆದರೂ ಏನದು ಪ್ರವಾಹಧಾಂಗ ಉಕ್ಕಿ ಹರಿದು ಪೂರ್ತಿ ವಲಿಯಲ್ಲ ಕ್ಷೀರ ಸಾಗರ. ಅಷ್ಟೇ ಅಲ್ಲ ,ಆ ಶಾಖಕ್ಕ ಪಟ್ಟನೆ ಹಾಲೆಲ್ಲ ಹೊತ್ತ್ಹೋತು. ಆ ಕಡೆಯಿಂದ ಅಯ್ಯೋ ಇದರಮ್ಯಾಲೆ ಅಡಗಿ ಸ್ವಲ್ಪು ನೋಡೋಂಕು ಮಾಡ್ಬೇಕ ಅಂತ ಆಕಾಶವಾಣಿ ಬಂತು. ನಮಗ ಕುದ್ದಿದ್ ಹಾಲಿನ ಛಾ ನೇ  ರುಚಿ. ಇಲ್ಲೇ  ಮಂದಿ ಹಾಲು ಕಾಯಿಸುದಿಲ್ಲ ಅಂತ! ಆಮ್ಯಾಲೆ ತಿಳೀತು. ಕಡಿಕೆ ಡಿಕಾಕ್ಷನ್ಗೆ ಹಸಿ ಹಾಲ್ ಹಾಕಿ ಛಾ ಕತಿ ಮುಗಿಸಿದ್ದಾಯ್ತು. ಮನಿಗೆ ಬಂದೋರೆಲ್ಲಾರ  ಮುಂದ ಇಂತ ಪ್ರಸಂಗ ಸದಾ ಆಗ್ತಿತ್ತು, ಅದಕ್ಕ ಅವರೆಲ್ಲ ನೀವ್ ಹಾಲ್ ಯಾಕ್ ಕಾಯ್ಸ್ತೀರಿ ಹಸಿದೇ ಹಾಕ್ರಿ ಅನ್ನೋರು,ಆದ್ರ ನಂಗ್ಯಾಕೋ ಚುಲೊ ಅನ್ಸೋದಿಲ್ಲ . ೨ ವರ್ಷ ಹಾಟ್ ಪ್ಲೇಟ್ ವಲಿ ಮ್ಯಾಲೆ ಅಡಿಗೆ ಮಾಡಿದ್ರು ಹಾಲ್ ಇಟ್ಟಾಗ ಮೈಯಲ್ಲ ಕಣ್ಣಾಗಿ ಇಕ್ಕಳ ಕೈಯಾಗ ಹಿಡಿದು ಉಕ್ಕಿ ಬಂದ್ ಕೂಡ್ಲೇ ಪಟ್ಟ್ನ ಭಾಂಡಿ ಬಾಜೂಕ ಇಡೋದು ರೂಡಿ ಮಾಡ್ಕೊಂಡೆ. 


ಒಗ್ಗರಣೆ 

ಮ್ಯಾಲೆ ಹಾಲಿನ ಕಥಿ ಕೇಳಿದ್ಮ್ಯಾಲೆ ಒಗ್ಗರಣಿ ಕಥಿಯು ನೀವೆಲ್ಲ ಊಹಿಸಿರಬಹುದು !! ಒಗ್ಗರಣಿ ?!!ಅದರಾಗೇನದ ? ಒನ್ ಚಮಚೆ ಎಣ್ಣಿ,ಸ್ವಲ್ಪ ಸಾಸಿವಿ ,ಜೀರಗಿ ಕರಿಬೇವು ಚೂರ್ ಇಂಗ್  ಮುಗಿತು,ಅಷ್ಟೇ !? ನಾನು ಹಂಗ ಅನ್ಕೊಂಡಿದ್ದೆ ,ಲಂಡನ್ನನಿಗೆ ಬರೋ ತನಕ. ಇಲ್ಲೂ ನಮ್ಮೊರ್ನಂಗ ಗ್ಯಾಸ್ ಮ್ಯಾಲೆ ಅಡಗಿ ಮಾಡಿಧಾಂಗ ಸಸಾರ ಅಂದು ಶುರು ಮಾಡಿದೆ. ಸಾರಿಗೆ ,ಪಲ್ಯಾಕ್ಕ ಒಂಚೂರು ಒಗ್ಗರಣಿ ಹೊತ್ತಿದ್ರ ನಡೀತದ ನೋಡ್ರಿ ಹೆಂಗೋ adjust ಮಾಡ್ಕೋಬಹುದು ಆದ್ರ ಈ ಹಚ್ಚಿದ ಅವಲಕ್ಕಿಗೆನರ ಒಗ್ಗರಣಿ ಹೊತ್ತ್ತೋ ಮುಗಿತು.ಅಷ್ಟೇ ಅಲ್ಲ ಆ ಅವಲಕ್ಕಿಯೊಳಗಿನ  ಶೇಂಗಾ ನೋಡ್ರಿ ಬಂಗಾರ ಇದ್ಧಾಂಗ ಹೊಳಿತಿರಬೇಕು ಆದ್ರ ಹೊತ್ತಬಾರ್ದು. ಈ ಒಗ್ಗರಣಿ ಕಲಾಗ ಸಾಕಾಗಿತ್ತು. ವಲಿ ಲಘು ಆರಿಸಿದ್ರ ಕಾಳು ಇನ್ನು ಹಸಿನೆ ಉಳಿತಾವ ಸ್ವಲ್ಪ ಬಿಟ್ಟನೋ ಹೊತ್ತ್ ಖರ್ರ್ಗಾಗಿ ಕಡೀಕೆ ಪೂರ್ತಿ ಅವಲಕ್ಕಿ ಮಜಾನೇ ಹೋಗಿಬಿಡ್ತದ. ಪ್ರತಿ ಮುಕ್ಕಿಗೂ ಹೊತ್ಸಿದಿಹೊತ್ಸಿದಿ ಅಂತ ಅನ್ನಿಸ್ಕೊಬೇಕು ಮತ್ತ. ಪೂರ್ತಿ ಅವಲಕ್ಕಿ ಕೆಡಿಸೋದ್ಕ್ಕಿಂತ  ಶೇಂಗಾನೇ  ತಿಪ್ಪಿಗೆ ಚೆಲ್ಲಿದ್ರಾತು ಅಂತ ಎಷ್ಟ್ ಸಲೆ ದಂಡ ಮಾಡೀನಿ. ಒಗ್ಗರಣಿ ಮಾಡೋದು ಒಂದ್ ಕಲಾ ಅಂತ ತಿಳ್ಕೊಂಡೆ ನೋಡ್ರಿ. 


ಅಕ್ಕಿಯ ವಿವಿಧತೆ 

ನನ್ನ ಅಪ್ಪನ ಜೊತೆ ಅಕ್ಕಿ ಅಂಗಡಿಗೆ ಹೋಗಿ ಅಕ್ಕಿ ತಂದದ್ದು ಸುಮಾರು ಬಾರಿ ,ಆದರೆ ಒಮ್ಮೆಯೂ ಸೂಕ್ಷ್ಮವಾಗಿ ಅವುಗಳ ಜಾತಿ ಆಕಾರ ಬಣ್ಣ ನೋಡಿ ಗುರುತಿಸಿಲ್ಲ. ನನಗೆ ಗೊತ್ತಿದುದ್ದು ಸೋನಾ ಮಸೂರಿ ಮತ್ತು ಬಾಸ್ಮತಿ ಅಷ್ಟೇ. ರೇಷನ್ ಅಕ್ಕಿ ಅಂತ ಬರ್ತಿತ್ತು ಅದನ್ನು ದೋಸೆ ಇಡ್ಲಿಗೆ ಉಪಯೋಗಿಸುತ್ತಿದ್ದರು. ಈಗ ಲಂಡನ್ನಿಗೆ ಬಂದ ಮೇಲೆ ಮನೆಯ ಹತ್ತಿರ ಇಂಡಿಯನ್ ಗ್ರೋಸರಿ ಸ್ಟೋರ್ಸ್ ಇರಲಿಲ್ಲ. ಹಾಗಾಗಿ asdaದಲ್ಲಿ ಯಾವ್ ಅಕ್ಕಿ ಸಿಕ್ತೋ ಅದನ್ನೇ ತಂದು ದೋಸೆಗೆ ನೆನೆ ಹಾಕಿದೆ. ನನ್ನ ಪರಮಾಶ್ಚರ್ಯಕ್ಕೆ ಡಿಸೆಂಬರ್ ನ  ಚಳಿಯಲ್ಲೂ ಹಿಟ್ಟು ಉಕ್ಕಿ ಉಕ್ಕಿ ಮರುದಿನಕ್ಕೆ ತಯಾರು ಆಯಿತು. ನಾನು ತುಂಬಾ ಜಂಬದಿಂದ ನನ್ನ ಪತಿಗೆ, 'ನಿಮ್ಮ ಸ್ನೇಹಿತರನ್ನು ಸಂಜೆ ಛಾ ಕೆ, ಕರೀರಿ ಮಸಾಲಾ ದೋಸೆ ಮಾಡ್ತೀನಿ' ಅಂತ. ಪಲ್ಯ ಚಟ್ನಿ ಎಲ್ಲ ತಯ್ಯಾರಿ ಆಯಿತು. ಮಂದಿನು ಬಂದ್ರು. ಒಂದು ಸೌಟು ತುಗೊಂಡು ಕಾದ ಹಂಚಿನ ಮೇಲೆ ಹಾಕಕ್ಕೆ ಹೋಗ್ತಿತ್ನಿ ,ಹಿಟ್ಟು ಹಂಚಿಗೆ ಅಂಟ್ ತಾನೇ ಇಲ್ಲ. ತುಂಬಾ ಮೃದುವಾಗಿ ಮುದ್ದೆ ಮುದ್ದೆಯಾಗಿ ಒಂದು ದೊಡ್ಡ ಹಿಟ್ಟಿನ ಚಂಡಿನಂತೆ ಸೌಟಿಗೆ ಅಂಟಿಕೊಂಡು ಬಂತು . ಅಯ್ಯೋ ಇದೇನು ಗ್ರಹಚಾರ.ಹಂಚು ಬದಲಿಸಿದೆ ,ಎಣ್ಣೆ ಜಾಸ್ತಿ ಹಾಕಿದೆ ಏನಾದ್ರು ದೋಸೆ ಹಂಚಿಗೆ ಅಂಟಿ ತಿರುವಲು ಬರ್ಲೆ ಇಲ್ಲ .ಏನೋ ಮೊದಲ ಸಲಾನು ಇಷ್ಟು  ಕೆಟ್ಟದಾಗಿ ಬಂದಿರ್ಲಿಲ್ವ ಅಂತ ಅಳುಬರುವುದೊಂದೇ ಬಾಕಿ ,ಪಾಪ ಬಂದ ಮಂದಿ ಇರ್ಲಿ ಬಿಡಿ ಅಂದು, ಒಬ್ಬ ಸ್ನೇಹಿತೆ ಏನೋ ಅಕ್ಕಿ ಹಿಟ್ಟು ಮೈದಾ ಹಿಟ್ಟು ಸೇರಿಸಿ ಕೊನೆಗೆ ದೋಸೆ ಆಕಾರಕ್ಕೆ ತಂದರು. ಅವತ್ತಿನ ಮಸಾಲೆ ದೋಸೆ ಒಂದು ಕಥೆಯೇ  ಆಯಿತು .ಈಗಲೂ ಆ ಸ್ನೇಹಿತೆ ನೆನಪಿಸಿ ನಗುತ್ತಾಳೆ.ಅದು ಯಾವ ಅಕ್ಕಿ ಆಗಿರಬಹುದೆಂದು ಊಹಿಸುತ್ತಿದೀರ? ಅದೇ ... ಲಾಂಗ್ ಗ್ರೇನ್ boiled ಬ್ರೌನ್ ರೈಸ್..ಮತ್ತೆ ಅದರ ತಂಟೆಗೆ ಹೋಗಲಿಲ್ಲ. 

ಆಮೇಲೆ ಅಕ್ಕಿಯ ವೆರೈಟಿ ಮೇಲೆ ಒಂದು ಅಧ್ಯನ ಮಾಡಿ ಎಚ್ಚರಿಕೆ ಇಂದ ಅಕ್ಕಿ ಖರೀದಿ ಮಾಡೋದಾಯ್ತು. ಮಂದಿಯನ್ನು ಕರಿಯುವ ಮುನ್ನ ಹಿಟ್ಟನ್ನು ಚೆಕ್ ಮಾಡಿ ದೋಸೆ ಆಗತ್ತೋ ಇಲ್ವೇ ಅಂತ ನೋಡಿ ಕರೀತೀನಿ. 

https://anivaasi.com/ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ