ರಾಜಸ್ಥಾನಿ ಚಿತ್ರಕಲೆ "ಪಿಚ್ಚವಾಯಿ"
ನಮ್ಮ ವಿಶಾಲ ದೇಶದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚೈತನ್ಯವನ್ನು ಕಲೆ ಮತ್ತು ವಿವಿಧ ರೀತಿಯ ಕರಕುಶಲ ವಸ್ತುಗಳು ಮೂಲಕವೂ ಚಿತ್ರಿಸಲಾಗುತ್ತದೆ.ಪುರಾಣದ ಸನ್ನಿವೇಶಗಳನ್ನು ಹಾಗು ನಂಬಿಕೆ, ಭಕ್ತಿ ,ಶ್ರದ್ದೆ ,ಜೀವನ ಶೈಲಿ ಎಲ್ಲವು ಚಿತ್ರಗಳ ,ಬಣ್ಣಗಳ ಹಾಗು ಕಥೆಗಳ ಮೂಲಕ ಜನರಿಂದ ಜನಕ್ಕೆ ,ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಲಾಗುತ್ತದೆ.
ಜಾನಪದ ಹಾಡುಗಳು ಬಾಯಿಂದ ಬಾಯಿಗೆ ತಲಪುವಂತೆ, ಜಾನಪದ ಚಿತ್ರಕಲೆ ಹಾಗು ಬುಡಕಟ್ಟು ಜನಾಂಗದ ಕಲೆಗಳು ಕೈಯಿಂದ ಕೈಯಿಗೆ ಸಂಚರಿಸಿ ವಿವಿದೆಡೆ ಹರಡುತ್ತದೆ. ಕೆಲ ಬಾರಿ ಸಾಂಪ್ರದಾಯಿಕ ಚಿತ್ರಕಲೆಗಳ ಬಣ್ಣ ಹಾಗು ಮತ್ತಿತರ ಸಾಮಗ್ರಿಗಳ ಎಲ್ಲೆಡೆ ಸಿಗದ ಕಾರಣ, ಸಂಶ್ಲೇಷಿತ ವಸ್ತುಗಳ ಉಪಯೊಗವಾಗಿತ್ತಿವೆ.
ನಮ್ಮ ದೈತ್ಯ ರಾಷ್ಟ್ರದ ಉದ್ದಗಲಕ್ಕೂ, ಪ್ರತಿ ಪ್ರದೇಶದಲ್ಲೂ ಅದರದೇ ಆದ ಜಾನಪದ ಮತ್ತು ಬುಡಕಟ್ಟು ಸಮುದಾಯದ ಕಲೆ ವೈಶಿಷ್ಟ್ಯತೆ ಇರುವುದು ಒಂದು ಅದ್ಭುತವೇ . ಭಾಷೆಯೇ ಶ್ರೀಮಂತಿಕೆ ಇದ್ದರು ಒಮ್ಮೊಮ್ಮೆ ಅದು ಜನರ ಜೀವನ ಶೈಲಿಯನ್ನು ಹೊರದೇಶಕ್ಕೆ ತಲುಪಿಸುವುದರಲ್ಲಿ ಸಫಲವಾದರೂ ಜನರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಾಫಲ್ಯತೆ ಪಡೆಯದಿರಬಹುದು .ಏಕೆಂದರೆ ಅದರ ಅನುವಾದವಾಗಬೇಕು. ಆದರೆ ಚಿತ್ರಕಲೆ, ಸಂಗೀತ ,ನೃತ್ಯ ಇವುಗಳಿಗೆ ಭಾಷೆಯ ತಡೆಗೋಡೆ ಇಲ್ಲ. ಯಾರು ಬೇಕಾದರೂ ನೋಡಿ ಆನಂದಿಸಿ ಪ್ರೋತ್ಸಾಹಿಸಬಹುದು.
ಕೆಲವು ದಶಕಗಳ ಹಿಂದೆ ಕೇವಲ ಸಿನೆಮಾ ಟಿವಿ ಹಾಗು ಪುಸ್ತಕಗಳ ಮೂಲಕವಷ್ಟೇ ಬೇರೆ ಜನಾ0ಗಳ ಬೆಗ್ಗೆ ತಿಳಿದುಕೊಳ್ಳಬಹುದಿತ್ತು. ಅಲೆಮಾರಿ ಸಮುದಾಯ ಲಂಬಾಡಿ ಹಾಗು ಸ್ವಜಾತಿಯವರು ತಮ್ಮ ಜೀವನ ಶೈಲಿಯನ್ನು ಅಲೆದಾಡುವ ಪ್ರದೇಶಕ್ಕೆಲ್ಲಾ ತಲುಪಿಸಿದ್ದುಂಟು. ಈಗ ದೈತ್ಯ ಹಾಗು ಶಕ್ತಿಶಾಲಿ ಇಂಟರ್ನೆಟ್ ನ ಸಹಾಯದಿಂದ ಕೂತಲ್ಲೇ ಸಾಕಷ್ಟು ಮಟ್ಟಿಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಚಿಕ್ಕಂದಿನಿಂದಲೂ ಚಿತ್ರಕಲೆ ,ಕರಕುಶಲತೆಯಲ್ಲಿ ಆಸಕ್ತಿ ಇದ್ದ ನನಗೆ ಬೇಡು ವೇಳೆಯಲ್ಲಿ ಏನಾದರು ಮಾಡುತ್ತಿದೆ ಹಾಗೆಯೇ ನನ್ನ ಉತ್ಸಾಹಕ್ಕೆ ಪೋಷಕರಿಂದ ಪ್ರೋತ್ಸಾಹ ಸಿಗುತ್ತಿತ್ತು. ಈಗ ಲಂಡನ್ನಿನಲ್ಲಿ ಒಂದು ದಶಕಕ್ಕೂ ಹೆಚ್ಚು ಇದ್ದ ನನಗೆ ನಮ್ಮ ದೇಶದ ಸಾಂಪ್ರದಾಯಿಕ ಹಾಗು ಸಾಂಸ್ಕೃತಿಕ ಅನೇಕತೆಯ ಮೇಲೆ ಒಲವು ಹೆಚ್ಚಾಗಿದೆ. ಕಳೆದ ವರ್ಷಸ್ವಲ್ಪ ಹೆಚ್ಚು ಸಮಯ ಸಿಕ್ಕ ಕಾರಣ ಇಂಟರ್ನೆಟ್ ಮೂಲಕ ಹಾಗು ಅಧಿಕೃತ ಹಾಗು ವಿಶ್ವಸನೀಯ ಕಲಾವಿದರ ಸಹಾಯದಿಂದ ಕೆಲವು ಚಿತ್ರಕಲೆಯ ಪರಿಚಯವಾಯಿತು. ನನ್ನ ಅದೃಷ್ಟವೇ ಸರಿ!
ಈಗಿನ ಪೀಳಿಗೆ ಭಾರತೀಯ ಹಾಗು ಜಾನಪದ ಕಲೆಯನ್ನು ಹೆಚ್ಚು ಪೋಷಿಸುವು ಕಾರಣ ,ಭಾರತ ಸರ್ಕಾರದ ಧೀರ್ಘ ಪರಿಶ್ರಮದಿಂದ ಈಗ ಜಗತ್ತಿನ್ನೆಲ್ಲೆಡೆ ಈವುಗಳ ಬೇಡಿಕೆ ಇದೆ. ನಾನು ಇಂತಹ ಆಸಕ್ತರ ರಸಿಕರ ಗುಂಪಿಗೆ ಸೇರಿದವಳು.ನಾನು ಕೂಡ ಕೆಲ ಜಾನಪದ ಹಾಗು ಬುಡಕಟ್ಟು ಚಿತ್ರಕಲೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ.
ಯಾವ ಪ್ರದೇಶದಿಂದ ಶುರು ಮಾಡಲಿ ? ಎಲ್ಲವು ಅಷ್ಟೇ ಸುಂದರ ಅಷ್ಟೇ ವಿಶಿಷ್ಟ. ಜನಪದ ಜೀವನಶೈಲಿ ಜೊತೆಗೆ ನಮ್ಮಲ್ಲಿ ಇರುವುದು ನಮ್ಮ ಶ್ರೀಮಂತವಾದ ಮತ್ತು ಧೀರ್ಘವಾದ ಪುರಾಣ ಕಥೆಗಳು ಹಾಗು ಹಿಂದೂ ಸಂಸ್ಕೃತಿಯ ದೈವ ನಂಬಿಕೆಗಳು. ಹೀಗಾಗಿ ನಾನು ಮೊದಲಿಗೆ ೪೦೦ ವರ್ಷಗಳ ಹಿನ್ನೆಲೆ ಹೊಂದಿರುವ ಉತ್ತರ ಭಾರತದ ಪಶ್ಚಿಮ ಭಾಗದಲ್ಲಿರುವ ರಾಜರ ರಾಜ್ಯ -ರಾಜಸ್ಥಾನಿ ಚಿತ್ರಕಲೆ "ಪಿಚ್ಚವಾಯಿ" ಅನ್ನು ಆರಿಸಿಕೊಂಡೆ. ಮನಮೋಹಕ ಕಮಲದ ಹೂವುಗಳು ಸುಂದರ ಕೊಳದಲ್ಲಿ , ಕೃಷ್ಣನ ಶಾಂತ ಮುಖ ಕಣ್ಣು ಮುಚ್ಚಿ ಎಲ್ಲರಿಗೆ ಮುಗುಳ್ನಗುತ್ತಾ ಆಶೀರ್ವಾದ ಮಾಡುವ ಚಿತ್ರ ಬಹಳ ಸಾಮಾನ್ಯ.ಹಾಗೆ ಕಾಮಧೇನುವಿನ ಚಿತ್ರಗಳು ,ಕೃಷ್ಣನ ರಾಸಲೀಲೆ , ರಾಧೆ, ಗೋಪಿಕೆಯರ, ಹಂಸಪಕ್ಷಿ , ನವಿಲು ಚಿತ್ರಣ ಬಹಳ ಸಂಕೀರ್ಣ ರೀತಿಯಲ್ಲಿ ಚಿತ್ರಿಸಲಾಗುತ್ತದೆ. ತೀಕ್ಷ್ಣ ಹಾಗು ನೈಸರ್ಗಿಕ ಬಣ್ಣಗಳು, ಹೊಳೆವ ಅಂಚು ಪಿಚ್ವಾಯಿ ಗೆ ಅದ್ಭುತ ಮೆರಗು ಕೊಡುತ್ತದೆ. ಮೂಲತಃ ಇವು ಭಿತ್ತಿಚಿತ್ರಗಳು, ಗೋಡೆಯ ವರ್ಣಚಿತ್ರಗಳು ಆಗಿದ್ದವು. ನಗರೀಕರಣದಿಂದ ಬಟ್ಟೆ ,ಹಾಳೆ ಹಾಗು ಕ್ಯಾನ್ವಾಸ್ ಮೇಲೆ ಚಿತ್ರಿಸಲಾಗುತ್ತಿದೆ. ನನ್ನತಂಹ ಕಲಾ ರಸಿಕರಿಗೆ ಲಭಿಸಿದ ಪುಣ್ಯ. ಏಕೆಂದರೆ ಇದನ್ನು ಎಲ್ಲಿ ಬೇಕಾದರೂ ಕೂತು ಪಯತ್ನಿಸಬಹುದು.
"ಪಿಚ್ವಾಯಿ" ಎಂದರೆ "ಹಿಂದೆ". ಇವು ಶ್ರೀನಾಥ್ಜಿಯ ವಿಗ್ರಹದ ಹಿಂಭಾಗದಲ್ಲಿ ನೇತಾಡುವ ಬಟ್ಟೆಗಳ ಮೇಲೆ ಮಾಡಿದ ಭಾವಗೀತಾತ್ಮಕ ಕಲಾಕೃತಿಗಳು, ಮುಖ್ಯವಾಗಿ ನಟ್ವಾಡ ಗರ್ಭಗುಡಿಯಲ್ಲಿ.ರಾಜಸ್ಥಾನದ ರಾಜಸಮಂಡ್ ಜಿಲ್ಲೆಯ ಬನಾಸ್ ನದಿಯ ದಡದಲ್ಲಿರುವ ನಟ್ವಾಡ ದೇವಸ್ಥಾನ.
ಕೌಶಲ್ಯತೇ ಮತ್ತು ಪ್ರಕ್ರಿಯೆಗೆ ಬದ್ಧತೆ-ಈ ಸಂಕೀರ್ಣ ಕೃತಿಗಳನ್ನು ಹುಟ್ಟುಹಾಕುತ್ತದೆ. ಇದು ನಮ್ಮ ಆಧ್ಯಾತ್ಮಿಕ ಹಾಗು ಧಾರ್ಮಿಕ ದೇವತೆಗಳ ಕಥೆಗಳನ್ನು ಉತ್ಸಾಹದಿಂದ ಆಚರಿಸುತ್ತದೆ. ಹಿಂದೂ ಧರ್ಮದಲ್ಲಿ ಕೊಟಿ ದೇವಿ ದೇವತೆಗಳು. ಅದರಲ್ಲೂ ವಿಷ್ಣುವಿನ ದಶಾವತಾರದಲ್ಲಿ ಶ್ರೀ ಕೃಷ್ಣನ ಅವತಾರ. ಶ್ರೀ ಕೃಷ್ಣನದೂ ನೂರಾರು ಅವತಾರ ಹಾಗು ಕಥೆಗಳು. ಈರೀತಿ ಜನರಲ್ಲಿ ಅಧ್ಯಾತ್ಮ ಹಾಗು ಧರ್ಮದ ಪ್ರಚಾರದ ಮಾಧ್ಯಮವಾಗಿ "ಪಿಚ್ವಾಯಿ" ಜನ್ಮಿಸಿತು.
ಈಗ ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯದ ಪ್ರಪಂಚದೆಲ್ಲೆಡೆ ಇರುವ ಭಾರತೀಯ ಮೂಲದವರಿಗೆ ಅನುಕರಣ ಯೋಗ್ಯವೆಂದು ಸಾವಕಾಶವಾಗಿ ಅರಿವಾಗುತ್ತಿರುವುದು ಒಂದೆಡೆ ಆದರೆ ಮತ್ತೊಂದೆಡೆ ಭಾರತೀಯ ಕಲೆ ,ಸಾಹಿತ್ಯ ಕರಕುಶಲ ವಸ್ತುಗಳಿಗೆ ಭಾರಿ ಬೇಡಿಕೆ ಇದೆ. ಜಾಗತೀಕರಣದ ಪ್ರಭಾವದಿಂದ ಮೂಲ ಹಾಗು ಅಧಿಕೃತ ಪಿಚವಾಯಿ ಹಾಗು ಮತ್ತಿತರ ಚಿತ್ರಕಲೆಯನ್ನು ವಿಶ್ಚಾಸಾರ್ಹ ರಾಫ್ತುದಾರರಿಂದ ಜಗತ್ತಿನೆಲ್ಲೆಡೆ ಪಡೆದುಕೊಳ್ಳಬಹುದು. ಹೀಗೆ ಅಸಂಖ್ಯಾತ ಸಾಂಪ್ರದಾಯಿಕ ಹಾಗು ಬುಡಕಟ್ಟು ಕಲೆಗಳಾದ ವರ್ಲಿ ,ಪಟ್ಟಚಿತ್ರ ,ಗೊಂದ್,ಲಿಪ್ಪಿನ್ ,ತಂಜಾವೂರು ,ಮೈಸೂರು ಶೈಲಿ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.
ಉದಯವಾಣಿಯ ದೇಸಿಸ್ವರ 20/3/2021 ಸಂಚಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
ಕಾಮೆಂಟ್‌ಗಳು