ದಟ್ಟೆ ದಟ್ಟೆಯ ದಟ್ಟ ಕಾರ್ಮೋಡ
ದಟ್ಟಗಾಲಿಡುವ ಅವಳ ಕೈಹಿಡಿದು ಹೆಜ್ಜೆಯನ್ನು ಇಡಿಸುವುದರಲ್ಲಿ ಆದ ಖುಷಿ
ಬೆಳೆಯುತ್ತಿದಂತೆ ಅವಳ ಪ್ರತಿ ಹೆಜ್ಜೆಯನ್ನು ಹಿಂಬಾಲಿಸಿ ಆದ ಕಸಿವಿಸಿ
ಆಡಲು ಬಲವಂತವಾಗಿ ಜೋಡು ಮಾಡಿಸಿದ ಪುಟ್ಟ ಪುಟ್ಟಿಯರು
ದೊಡ್ಡವಳಾಗುತ್ತಾ ಸಂದೇಹದಿಂದ ಕಾಣುವ ಅವಳ ಗೆಳೆಯರು
ಅವಳ ಕೈಹಿಡಿದು ಬರೆಸಿದ ಮೊದಲನೆಯ ಅಕ್ಷರದ ಸಂತೋಷ
ಅವಳ ಉನ್ನತ ಅಧ್ಯಯನದ ತೀರ್ಮಾನದಿಂದಾದ ಅತಿ ಕ್ಲೇಶ
ಹದಿ ವಯಸ್ಸಿನಲ್ಲಿ ಸ್ವತಂತ್ರವಾಗಿ ಶಾಲೆಗೆ ಹೋದಾಗ ಬೀಗಿದ ಮುಖ
ಹಾಸ್ಟೆಲಿನಲ್ಲಿ ಇರುತ್ತೇನೆ ಎಂದಾಕ್ಷಣ ಎಲ್ಲರ ಇಳಿ ಮುಖ
ಶಾಲೆಯಲ್ಲಿನ ಉತ್ತಮ ಅಂಕಗಳು ಸಾಲಾಗಿ ಜೋಡಿಸಿದ ಪ್ರಶಸ್ತಿಗಳು
ಕಾಲೇಜಿನಲ್ಲಿ ಗೆದ್ದ ಸ್ಪರ್ಧೆಗಳು ಕೇವಲ ಹವ್ಯಾಸದ ವಸ್ತುಗಳು
ಸ್ವಂತವಾಗಿ ಸ್ವತಂತ್ರವಾಗಿ ದುಡಿಯಬೇಕೆಂದಾಗ ಎಲ್ಲರ ಪ್ರಶ್ನೆ
ಏಕೆ ಈ ಸ್ವಾತಂತ್ರ್ಯ ಸ್ವಚ್ಛಂದ ಬೀದಿ ಜನರ ಕಣ್ಣಮೂಗಿನ ಸನ್ನೆ
ತಾಯಿಯ ಹಾಡಿಗೆ ತೊದಲುತ್ತಾ ತಪ್ಪು ಹೆಜ್ಜೆಯಲ್ಲಿ ಗೆಜ್ಜೆಯ ಸಪ್ಪಳದಿಂದ ನಲಿಯುತ್ತಾ
ಆಗುವಳು ಇವಳು ಗಾಯಕಿ ನರ್ತಕಿ ಎಂಬ ಕನಸನ್ನು ಮನೆಯವರೆಲ್ಲರೂ ಕಾಣುತ್ತಾ
ಸಮಾಜದ ಒತ್ತಡದ ರಾಗಕ್ಕೆ ಗಾಯಕಿಯಾಗಿ ಎಲ್ಲರ ತಾಳಕ್ಕೆ ನರ್ತಕಿಯಾಗಿ
ತನ್ನ ಉತ್ಸಾಹ ಆಸೆಗಳ ಸ್ವಂತತನವನ್ನು ಕಳೆದುಕೊಂಡವಳಾಗಿ
********************************************************************
ಮಗುವಾಗಿದ್ದಾಗ ಇಲ್ಲದ ತಾರತಮ್ಯ
ತಿಳಿಯದೆ ಹೋಯಿತೇ ಅವಳ ಗಮ್ಯ
ಕಾಮೆಂಟ್‌ಗಳು