ಸವಿರುಚಿಯೊಂದಿಗೆ ಸದವಕಾಶ ಸೃಷ್ಟಿಸುತ್ತಿರುವ “ಶ್ರೀರುಚಿ”
ವಿದೇಶದಲ್ಲಿ ನೆಲೆಸಿದ ನಮಗೆ ನಮ್ಮ ಸ್ವದೇಶದ ನೆನಪು ಪ್ರತಿಕ್ಷಣವೂ ಮೂಡುತ್ತಲೇ ಇರುತ್ತದೆ. ಅದರಲ್ಲೂ ನಮ್ಮ ಸಂಪ್ರದಾಯದ ಅಡುಗೆಯ ರುಚಿ ಮತ್ತು ಖಾದ್ಯ ವಸ್ತುಗಳ ಬಗೆಗಿನ ನೆನಪುಗಳು ಇನ್ನೂ ಹೆಚ್ಚು ಹೊಮ್ಮುತ್ತವೆ. ಕೆಲವರಿಗೆ ತಮ್ಮ ಊರಿನ ಅಡುಗೆಯ ಹಂಬಲ ಎಷ್ಟು ತೀವ್ರವಾಗಿರುತ್ತದೆಯೆಂದರೆ, ತಮ್ಮ ಊರಿಗೆ ಹೋದಾಗ ಅಲ್ಲಿಂದ ಸರಕುಪೆಟ್ಟಿಗೆಯಲ್ಲಿ ಆ ವಸ್ತುಗಳನ್ನು ತಂದೂ ಬಿಡುತ್ತಾರೆ ಅಥವಾ ಅಂಚೆ ಮೂಲಕ ವಿದೇಶಕ್ಕೆ ತಲುಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅನಿವಾಸಿಗಳು ಭಾರತದ ಸಣ್ಣ ಕೈಗಾರಿಕೆಗಳ ಸಹಾಯದಿಂದ, ತಮ್ಮ ತವಕದ ಖಾದ್ಯ ವಸ್ತುಗಳನ್ನು ವಿದೇಶದಲ್ಲಿ ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ನಾನಾ ಪ್ರದೇಶಗಳಲ್ಲಿ ತಿನಿಸುಗಳ ವೈಶಿಷ್ಟ್ಯತೆಯು ಕಂಡುಬರುತ್ತದೆ. ಜನಪ್ರಿಯ ಖಾದ್ಯ ವಸ್ತುಗಳನ್ನು ಆಮದು ಮಾಡುವ ಸಣ್ಣ ಪ್ರಮಾಣದ ವ್ಯಾಪಾರಗಳು ಕೋವಿಡ್ ನಂತರದ ಅವಧಿಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಇಂಗ್ಲೆಂಡಿನಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಖಾದ್ಯ ವಸ್ತುಗಳಿಗೆ ಸಾಕಷ್ಟು ಅಂಗಡಿಗಳು ಮತ್ತು ಉಪಹಾರ ಕೇಂದ್ರಗಳಿವೆ. ಆದರೆ, ಕರ್ನಾಟಕದ, ವಿಶೇಷವಾಗಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ನಾನಾ ಚಟ್ನಿ ಪುಡಿಗಳಂತಹ ಖಾದ್ಯ ವಸ್ತುಗಳಿಗೆ ವ್ಯಾಪಕ ಅಂಗಡಿಗಳು ಇಲ್ಲ. ಮತ್ತೊಂದು ಮುಖ್ಯ ವಿಚಾರವೆಂದರೆ, ಗ್ರಾಹಕರಿಗೆ ತಮ್ಮ ಇಷ್ಟದ ಖಾದ್ಯ ವಸ್ತುಗಳ ಮಾರುಕಟ್ಟೆ ಹೆಸರು (ಬ್ರ್ಯಾಂಡ್) ತಿಳಿದಿರಬಹುದು, ಆದರೆ ಭಾರತೀಯ ಖಾದ್ಯ ಉತ್ಪಾದಕರ...